?- 1991. ಪ್ರಸಿದ್ಧ ಚಿತ್ರನಿರ್ದೇಶಕರು. 1961ರಲ್ಲಿ ಲಂಡನ್ನಿನ ಬ್ರಿಟಿಷ್ ಫಿಲ್ಮ್ ಇನ್‍ಸ್ಟಿಟ್ಯೂಟ್‍ನವರ ನೆರವಿ ನೊಡನೆ ತೆಗೆದ ಬ್ಲಿಸ್ ಎಂಬ 8 ನಿಮಿಷಗಳ ಪ್ರಾಯೋಗಿಕ ಕಿರುಚಿತ್ರದಿಂದ ಇವರಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿದುದರ ಜೊತೆಗೆ 1962ರಲ್ಲಿ ಈ ಚಿತ್ರಕ್ಕೆ ಸ್ಯಾನ್‍ಫ್ರಾನ್ಸಿಸ್ಕೊ ಅಂತಾ ರಾಷ್ಟ್ರೀಯ ಚಲನಚಿತ್ರೋ ತ್ಸವದ ಪ್ರಶಸ್ತಿ ಕೂಡ ಲಭಿಸಿತು. ಇವರು ಕಿರುಚಿತ್ರ ವೊಂದರ ತಯಾರಿಕೆಗೆ ಬ್ರಿಟಿಷ್ ಫಿಲ್ಮ್ ಇನ್‍ಸ್ಟಿಟ್ಯೂ ಟಿನ ಮನ್ನಣೆಪಡೆದ ಪ್ರಥಮ ಭಾರತೀಯ. ಕೆಲಕಾಲ ಬಿ.ಆರ್. ಕೃಷ್ಣಮೂರ್ತಿ, ಆರ್. ನಾಗೇಂದ್ರರಾವ್ ಅವರ ಬಳಿ ಸಹನಿರ್ದೇಶಕರಾಗಿ ಕೆಲಸಮಾಡಿದ ಇವರು ಸ್ವತಂತ್ರ ನಿರ್ದೇಶಕರಾದದ್ದು 1964ರಲ್ಲಿ; ತಾವೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ ಮೊದಲ ಚಿತ್ರ ನಾಂದಿಯ ಮೂಲಕ.  ಕುರುಡು ಮೂಗರ ಜೀವನವನ್ನು ಕುರಿತ ಈ ಮನೋಜ್ಞ ಕಲಾತ್ಮಕ ಚಿತ್ರ ಕರ್ನಾಟಕದಲ್ಲಿ ಅಪಾರ ಹೆಸರುಗಳಿಸಿತಲ್ಲದೆ. 1965ರಲ್ಲಿ ಲಂಡನ್‍ನಲ್ಲಿ ನಡೆದ ಕಾಮನ್‍ವೆಲ್ತ್ ಚಿತ್ರೋತ್ಸವಕ್ಕೆ ಪ್ರವೇಶ ಪಡೆಯಿತು. ಭಾರತದ ಹೊರಗೆ ಪ್ರದರ್ಶಿತವಾದ ಪ್ರಥಮ ಕನ್ನಡ ಚಿತ್ರ ಇದು. ಚದುರಂಗರ ಕಾದಂಬರಿ ಆಧಾರಿತ ಇವರ ಎರಡನೆಯ ಚಿತ್ರ ಉಯ್ಯಾಲೆ (1969) ಕೂಡ ಜರ್ಮನಿಯ ಫ್ರಾಂಕ್‍ಫರ್ಟ್‍ನಲ್ಲಿ ನಡೆದ ಏಷ್ಯನ್ ಚಿತ್ರೋತ್ಸವ (1970) ಹಾಗೂ ರಷ್ಯದ ಬೈಲೊರಷ್ಯದಲ್ಲಿ ನಡೆದ ಚಿತ್ರೋತ್ಸವಗಳಲ್ಲಿ (1971) ಪ್ರದರ್ಶನ ಕಂಡು ವಿದೇಶೀಯರ ಮೆಚ್ಚುಗೆಗೆ ಪಾತ್ರವಾಯಿತು. ಇವರ ಇನ್ನೊಂದು ಚಿತ್ರ ಮುಕ್ತಿ(1971) ವೆನಿಸ್ ಚಿತ್ರೋತ್ಸವಕ್ಕೆ ಪ್ರವೇಶಪಡೆಯಿತಲ್ಲದೆ (1971) ಅದೇ ವರ್ಷ ರೋಮನ್ ಗ್ರ್ಯಾಂಡ್‍ಪ್ರೀ ಅವಾರ್ಡ್ ಸ್ಪರ್ಧೆಗೂ ನಾಮಕರಣ ಹೊಂದಿತು. 1973ರಲ್ಲಿ ಇವರು ನಿರ್ದೇಶಿಸಿದ, ಪೂರ್ಣಚಂದ್ರ ತೇಜಸ್ವಿಯವರ ಸಣ್ಣಕಥೆಯಾಧಾರಿತ ಅಬಚೂರಿನ ಪೋಸ್ಟ್ ಆಫೀಸ್ ಎಂಬ ಚಿತ್ರಕ್ಕೆ ರಾಷ್ಟ್ರಪತಿಯ ರಜತಪದಕ ಪ್ರಶಸ್ತಿ ದೊರೆಯಿತು.  ಅಲ್ಲದೆ, ಈ ಚಿತ್ರ ಟೆಹರಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿತು (1974).

ಲಕ್ಷ್ಮೀನಾರಾಯಣ ಅವರು 1971ರಲ್ಲಿ ಲಂಡನ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ನಿರ್ದೇಶಕನ ವಿದೇಶಯಾತ್ರೆ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ (1974). ಇವರು 1991ರ ಫೆಬ್ರವರಿಯಲ್ಲಿ ನಿಧನರಾದರು.
	                
 (ಎಸ್.ಎಸ್.ಎಮ್‍ಯು.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ